ಬಳ್ಳಾರಿ : ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ರಾಜ್ಯದಲ್ಲಿ ಶೀಘ್ರವೇ 2000 ಲೈನ್’ಮೆನ್ಗಳ ನೇಮಕಾತಿಯನ್ನು ಮಾಡಲಾಗುತ್ತದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 2000 ಲೈನ್ಮೆನ್ಗಳ ನೇಮಕಕ್ಕೆ ಇನ್ನು 15 ದಿನದಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಸಾಮಾನ್ಯವಾಗಿ ಲೈನ್ಮೆನ್ಗಳ ನೇಮಕದ ವೇಳೆ ಒಂದು ಜಿಲ್ಲೆಯವರು ಇನ್ನೊಂದು ಜಿಲ್ಲೆಯಲ್ಲಿ ಅರ್ಜಿಯನ್ನು ಸಲ್ಲಿಸಿ ನೇಮಕಗೊಳ್ಳುತ್ತಾರೆ. ಬಳಿಕ ತಮ್ಮ ಜಿಲ್ಲೆಗೆ ವರ್ಗಾವಣೆಯನ್ನು ಮಾಡಿಸಿಕೊಳ್ಳುತ್ತಾರೆ.
ಇದರಿಂದ ಕೆಲವು ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಲೈನ್ಮೆನ್ಗಳ ಕೊರತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 2000 ಲೈನ್ಮೆನ್ಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಆಯಾ ಜಿಲ್ಲೆಯವರಿಗೆ ಅವಕಾಶವನ್ನು ಮಾಡಿಕೊಡುವ ಉದ್ದೇಶದಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದರು.
ವಿದ್ಯುತ್ ಪೂರೈಕೆಯ ಕುರಿತದ ಸಮಸ್ಯೆಗಳನ್ನು ಬಗೆಹರಿಸುವಂತಹ ನಿಟ್ಟಿನಲ್ಲಿ ಎಲ್ಲಾ ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಆಯಾ ಜಿಲ್ಲೆಯ ಎಸ್ಕಾಂ ಮುಖ್ಯ ಎಂಜಿನಿಯರ್ಗಳನ್ನು ಒಳಗೊಂಡಂತೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ನಿರಂತರವಾಗಿ ಸಭೆಯನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.
ಈ ಹಿಂದೆ ಸೂಚನೆಯನ್ನು ನೀಡಿದ್ದರೂ ಕೆಲವರು ಸಭೆಯನ್ನು ಕರೆದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ರೀತಿಯ ಸಭೆಯನ್ನು ತಪ್ಪದೆ ಕರೆಯುವಂತೆ ನಿರ್ದೇಶನವನ್ನು ನೀಡಲಾಗಿದೆ. ಅಲ್ಲದೆ, ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಿಗೆ ಕೆಪಿಟಿಸಿಎಲ್ ನಿಂದ ಒಬ್ಬ ಪ್ರತಿನಿಧಿಯನ್ನು ಕಡ್ಡಾಯವಾಗಿ ಕಳುಹಿಸುವಂತೆ ಸೂಚನೆಯನ್ನು ನೀಡಲಾಗಿದೆ” ಎಂದು ತಿಳಿಸಿದರು.
ಇತರೆ ವಿಷಯಗಳು:
ಯಜಮಾನಿಯರಿಗೆ ಇಂದಿನಿಂದ ಹಂತ ಹಂತವಾಗಿ ʻಗೃಹಲಕ್ಷ್ಮಿʼ ಹಣ ಜಮಾ!
ATM ಶುಲ್ಕದಲ್ಲಿ ದಿಢೀರ್ ಹೆಚ್ಚಳ..! ಇಷ್ಟು ಬಾರಿ ಮಾತ್ರ ಉಚಿತವಾಗಿ ಹಣ ಹಿಂಪಡೆಯಲು ಅವಕಾಶ